Monday, 1 August 2011

ಸ್ನೇಹ ಸಮ್ಮಿಲನ

ಅರಳುವ ಹೂ ಮೇಲೆ ಮಂಜು ಸುರಿದಂತೆ ಜೀವನ,
ಹೂ ಬನಕೆ ರಂಗೇರಿಸಿದೆ ನಿನ್ನ ಗೆಳೆತನ......

ಒಮ್ಮೊಮ್ಮೆಬೇವಿನ ಕಹಿಯಂತೆ ಜೀವನ,
ಬೇವಿಗೆ ಬೆಲ್ಲವ ಉಣಿಸಿದೆ ನಿನ್ನೀ ಗೆಳೆತನ....

ನರ್ತಿಸುವ ದೀಪವ ಬಿರುಗಾಳಿಯಿಂದಾರಿಸಿ,
ಕ್ಷಣಿಕ ಸುಖವ ಕೊಟ್ಟೋಡುವುದೀ ಜೀವನ......
ಆರಿದ ದೀಪಕೆ ಒಲುಮೆಯ ಸುರಿದು,
ನರ್ತಿಸುವಂತೆ ಮಾಡಿದೆ ನಿನ್ನೀ ಗೆಳೆತನ......

ಅಚ್ಹರಿ  ತುಂಬಿದ್ದ ಕಣ್ಣಿಂದ ನಾ ನೋಡಿದ್ದೇ ನಿನ್ನ ಆ ದಿನ,
ಅರಿವಿಲ್ಲದೆ ಸ್ನೇಹವಾಯಿತೇ  ಆ ಅಚ್ಹರಿ ಈ ದಿನ??????
ಹೃದಯ ಸಮೀಪಿಸಿದೆ ನೀ,
ತಿಳಿಯದಾದೆ ನಾ ಕಾರಣ.....
ಬೇರೇನಿಲ್ಲ ಗೆಳೆಯ,
ಅದುವೇ ನಿನ್ನ ಮುಗ್ಧ ಮನಸ್ಸಿನ ಗೆಳೆತನ.....

ಮಂಜಿನ ಮುಸುಕಲಿ ಸೂರ್ಯನ ಕಿರಣವ,
ಬಿಂಬಿಸುವಂತೆ ನಿನ್ನ ಆ ನಯನ....
ಪದೇ ಪದೇ ಸೆಳೆಯುವ ನಿನ್ನೀ ನಯನ,
ನೂತನ ವಿನೂತನ..... 

ಬೆಳಗಿನ ಜಾವದ ಇಬ್ಬನಿಯಂತೆ,
ನನ್ನೀ ಬದುಕಿಗೆ ನಿನ್ನೀ ಆಗಮನ...
ಗೌರವದ ಭಾವ ಮೊಳೆತು,
ಹೃದಯ ನೀಡಿದೆ ನಿನಗೆ ಸುಂದರ ತಾಣ....

ನೀ ನನ್ನ ಬದುಕಲಿ ಆಕಸ್ಮಿಕ ಆಮಂತ್ರಣ,
ನಿನ್ನೀ ಕರೆಗೆ ಸಾಕ್ಷಿಯೇ ನಮ್ಮೀ ಸ್ನೇಹದ ಸಮ್ಮಿಲನ......

ಕಗ್ಗತಲಲಿ ನಿಂತು ಕಂಗಾಲಾದರೆ,
ನೆನೆಯುವೆ ನಿನ್ನ....
ಅನುಮಾನವೇ ಇಲ್ಲ ಗೆಳೆಯ,
ದುಂಬಿಯ ನಿನಾದದಂತೆ ಬೆಳಕು ಝೇoಕರಿಸುವುದು,
ನಿನ್ನ ನೆನೆದಾಕ್ಷಣ.....

ನೀ ಪುಟಿಪುಟಿದು ಚಿಮ್ಮುವ ಸ್ಪೂರ್ತಿಯ ಸೆಲೆ,
ಅದಾಗಲಿ ಮತ್ತೊಂದು ಜೀವಕೆ ಸಂಭ್ರಮದ ನೆಲೆ...

ನಿನ್ನ ನೋಡಿದರೆ ಧುಮ್ಮಿಕ್ಕುವುದು ಅಭಿಮಾನದ ಜಲಪಾತ,
ನಿನ್ನ ಭಾವವು ಬೆಲೆಕಟ್ಟಲಾಗದ ಸುವಾಸನೆಯ ಪಾರಿಜಾತ....

ನಿನ್ನ ಕಣ್ಣಲಿ ಕಂಡೆ ನಾ ತಂದೆಯ ಅಕ್ಕರೆ,
ನಿನ್ನ ಬದುಕು ಸುಖವಾಗಿರಲಿ ಬೆರೆತಂತೆ ಹಾಲು ಸಕ್ಕರೆ.....

ನೀನಾದೆ ನನ್ನೀ ಬದುಕಿಗೆ ಮರುಳಿ ಬಂದ ಆಶಾಕಿರಣ,
ನಮ್ಮೀ ಸುಂದರ ಸ್ನೇಹಕೆ ಭಾವಪೂರ್ಣ ನಮನ........



Wednesday, 20 July 2011

ಸಂಭ್ರಮ

ನವಿರಾದ ಕಂಪನದಲಿ ತೇಲಿದೆ ಮನ,
ತಂಗಾಳಿಯು ಬಿಗಿದಪ್ಪಿದೆ ಒಂದು ಕ್ಷಣ.....

ಅಚ್ಹರಿಯ ಕಂಗಳಲಿ ಲಜ್ಜೆಯ ಹೊಳಪು,
ರಂಗೇರಿದ ಕೆನ್ನೆಗೆ ಒಂಥರಾ ನುಣುಪು.......

ಕಾರಣ ತಿಳಿಯುತ್ತಿಲ್ಲ ಈ ಸಂಭ್ರಮಕ್ಕೆ,
ತಿಳಿಯುವ ಹಂಬಲವಿಲ್ಲ ಈ ಗರಿಬಿಚ್ಚಿರುವ  ನವಿಲಿಗೆ.......

ಹೊಳೆಯ ದಂಡೆಯಲಿ ಕೂತು ನಾಚಿ ನೀರಾಗುತಿರುವೆ,
ಸೂರ್ಯನ ಕಿರಣವ ಬಾಚಿ ಬಾಚಿ,
ಬಚ್ಚಿಡುವ ನೀರಿನ ಪರಿಗೆ ಕಂಗಾಲಾಗಿರುವೆ.....

ನನಗರಿವಿಲ್ಲದೆ ನನ್ನ ನಡುವಿಗು ಲಜ್ಜೆ ಬಂದಿದೆ,
ನನ್ನ ನಡುವ ನೋಡುತ,
ರವಿಯ ಮೊಗವು ರಂಗೇರಿದ ಹೂವಿನ ರಾಶಿಯಾಗಿದೆ........

ಅಯ್ಯೋ ಪೆದ್ದು ಮನವೇ,
ಮರೆತೆಯ ಕಾರಣವ???
ನಡೆಯುತ ಸಂಭ್ರಮದ ಹಾದಿಯಲಿ......

ಕಾರಣ ಹುಡುಕುವ ಹಂಬಲವಿಲ್ಲ,
ಸಂಭ್ರಮದ ಹಾದಿಯಲ್ಲಿ ನಡೆಯುವಾಗ....
ನನ್ನ ಇನಿಯನ ನೆನಪು,
ಅಣು ಅಣುವಲ್ಲು ಸಂಧಿಸಿರುವಾಗ.....

ಅವನ ಮುತ್ತಿನ ಮತ್ತಲ್ಲಿ ತೆಲಾಡುತಿರುವೆ,
ಬೆಲೆ ಕಟ್ಟಲಾಗದ ಅವ ನೀಡಿದ ಮುತ್ತನು,
ಕಪ್ಪೆಚಿಪ್ಪಲ್ಲಿ ಭದ್ರವಾಗಿಟ್ಟಿರುವೆ....
ಮತ್ತೊಂದು ಮುತ್ತಿಗೆ ಕಾಯುತ್ತಿರುವೆ ಇನಿಯ,
ಕೊಡಲಾರೆಯ????

ನೀ ನೆನಪಾದಾಗಲೆಲ್ಲ ತುಂಟತನ ಮೈ ತುಂಬಾ ಹರಿದು,
ಬೀಸುವ ತಂಗಾಳಿಗೆ ನಾಚಿಕೆಯ ಹೊದಿಕೆ ಹೊದಿಸಿ,
ಮಾನವ ಬೆಚ್ಚಗಾಗಿಸುವ ಆಸೆ ಕಣೋ......
ಆದರೆ ಅರಿವಿಲ್ಲದೆ ನಾಚಿಕೆ ಮೈಇಂದ ಹರಿದು,
ಮನ ತಂಗಾಳಿಯೆಡೆಗೆ ವಾಲುವಾಗ,
ಪುಟ್ಟ ಕಂಗಳಲಿ ಅಚ್ಚ್ಹರಿಯ ಧಾರೆ ಸುರಿಯುವುದು ಕಣೋ....

ಈ ಸಂಭ್ರಮದ ಹಾದಿ ಕೊನೆಯಾಗಲಾರದೆಂಬ,
ಭರವಸೆಯಿಂದ ಸಾಗುತಿರುವೆ....
ಕೊನೆಯಾದರು ನೋವಿಲ್ಲ,
ತಿರುಗಿ ಮತ್ತೆ ನಿನ್ನೆಡೆಗೆ ಪಯಣ.....
ಅದೇ ಮುತ್ತು, ಅದೇ ಅಪ್ಪುಗೆ, ಅದೇ ತುಂಟತನ.......

ಈ ಪಯಣ ಎಂದೂ ಕೊನೆಯಾಗದ ಮೋಹಕ,
ನನ್ನ ಅಣು ಅಣುವಲು ನೀ ಬೆರೆತಿರುವ ತನಕ..........

Monday, 18 April 2011

ನೀ ಇದ್ದಾಗ

ಜೀವನ ತಂಗಾಳಿಯಂತೆ ಬೀಸುತ್ತಿತ್ತು,
ಗೆಳೆಯ ನೀ ಇದ್ದಾಗ....
ಭವಣೆ ಇಲ್ಲದ ಬದುಕಿತ್ತು,
ನಮ್ಮಿಬ್ಬರ ಮನ ಸೇರಿದ್ದಾಗ..

ಬರೀ ಸಿಹಿಯ ಸವಿ ಅನುಭವಿಸಿದ್ದೆ,
ಕಹಿ ಎಂಬುದ ಮರೆತಿದ್ದೆ,
ಮನಸಿನ ಮೌನವ, ಭಾವನೆಯಾಗಿ ಸುರಿಸಿದ್ದೆ...
ಮೌನಕ್ಕೂ ಮಾತು ಕಲಿಸಿತ್ತು,
ನಿನ್ನ ಒಲವು ಗೆಳೆಯ...

ನೀ ಸರಿದಾಡಿದರೆ ಸಾಕು,
ಮನಸ್ಸು ಮೈ ನೆರೆದ ಹೆಣ್ಣoತಾಗುತ್ತಿತ್ತು,
ಮೊಗ ಲಜ್ಜೆಯಿಂದ ನಾಚಿ ನೀರಗುತ್ತಿತ್ತು,
ಮೈ ಮನ ತುಂಬಿ ತುಳುಕುತ್ತಿತ್ತು,
ಉದ್ವೇಗದಿ ಕಂಪಿಸುತ್ತಿತ್ತು.....

ಮನ ಮೆರವಣಿಗೆ ಹೊರಟಂತೆ,
ನಾ ರಥದಲ್ಲಿ ಕುಂತಂತೆ,
ನೀ ಎದುರು ಬಂದಂತೆ...
ಎನೇನೋ ಗೆಳೆಯ...
ಬದುಕು ಗರಿಬಿಚ್ಚಿದ ಹಕ್ಕಿಯಂತೆ,
ಸ್ವಚ್ಚಂದವಾಗಿ ಹಾರಿತ್ತು.....

ಎಲ್ಲಿ ದೂರಾದೆಯೋ ನೀನು???
ಸವಿಯ ಸೊಬಗನ್ನು ಉಣಿಸಿ....

ಮಾಯವಾಗಿರುವ ನಿನ್ನ ಹುಡುಕುವ ತವಕವಿಲ್ಲ,
ಕಂಬನಿಯ ಮಿಡಿಯುತಿಲ್ಲ...
ನೀ ಕೊಟ್ಟ ನೆನಪಿನ ದೋಣಿಯಲ್ಲಿ ಕುಳಿತಿರುವೆ,
ಜೀವನದ ಸಮುದ್ರದಿ ಸುಖವಾಗಿ ಸಾಗುತಿರುವೆ,
ಅಲೆಗಳ ರಭಸವು ನವಿರಾಗಿ ಕಂಪಿಸುತ್ತಿದೆ....
ನಿನ್ನ ನೆನಪನ್ನು ಮೆಲುಕು ಹಾಕುತ,
ರಂಗೇರಿದ ನನ್ನ ಮೊಗವ ನೋಡಿ,
ಸಮುದ್ರವೇ ಶಾಂತವಾಗಿದೆ,
ಅಲೆಗಳ ಅಬ್ಬರವೂ ಇಳಿದಿದೆ...

ಸೀರೆಯ ಉಟ್ಟು ಕುಳಿತಿರುವೆ ನೆನಪಿನಂಗಳದಲ್ಲಿ,
ಹೆಣ್ತನವು ತುಂಬಿ ಹೊಳೆಯುತ್ತಿದೆ,
ಬೆಳದಿಂಗಳ ಬೆಳಕಿನಲ್ಲಿ....

ಚುಕ್ಕಿ ತಾರೆಗಳು ಕೇಳಿವೆ ಈ ಚೆಲುವೆ ಯಾರೆಂದು?
ಯಾವ ಚೆಲುವನಿಗಾಗಿ ಕಾಯುತಿಹಳೆಂದು????
ಪ್ರಕೃತಿಯೇ ಉತ್ತರಿಸಿದೆ,
ಈಕೆ ಬೆಳದಿಂಗಳ ಬಾಲೆಯೆಂದು,
ನೆನಪಿನಂಗಳದಲ್ಲಿ ಕುಳಿತಿಹಳೆಂದು.....

ಧನ್ಯನಾದೆನು ಗೆಳೆಯ ನಿನ್ನ ಪ್ರೀತಿಯ ಪರಿಗೆ,
ಮತ್ತೆ ಹೊರಬರಲಾರೆ ಕೊಚ್ಚಿ ಹೋಗಿರುವ ರಭಸಕ್ಕೆ.....



Thursday, 14 April 2011

ಕನಸು

ಕನಸು ಏನೆಂದು ಹುಡುಕಿದೆ,
ತಿಳಿಯದಾದೆ ಉತ್ತರ,
ತಿಳಿಯಿತು ಕೊನೆಯಲಿ,
ನಾನಿರುವುದೆ ಕನಸಿನ ಲೋಕದಲಿ.....

ಕನಸೊಂದ ಕಂಡೆ,
ಕ್ಷಣಿಕದ ಖುಷಿಯಲ್ಲಿ ಮಿಂದೆ,
ಬಾಡಿತು ಕನಸು, ನೊಂದಿತು ಮನ,
ಮಿಡಿದಿದೆ ಕಂಬನಿ, ಕರಗಿದೆ ಕಣ್ಣು.....

ಕನಸು ಜಾರುತಿದೆ ಕಂಬನಿಯಾಗಿ,
ಮನಸು ಮರುಗಿದೆ ತಬ್ಬಲಿಯಾಗಿ.....

ಕಳೆದೊಗಿರುವ ಕನಸ ಹುಡುಕುತ ಹೊರಟಿರುವೆ,
ಮರಳಿ ಪಡೆಯುವೆ ಎಂಬ ಕನಸ ಹೊತ್ತು....

ಕನಸೊಳಗೆ ಕನಸಿನ ಬಲೆ,
ಸಿಗುವುದೇ ಬದುಕಿಗೆ ನೆಲೆ,
ಕೊಡುವೆಯಾ ನೀನು ಸ್ಪೂರ್ತಿಯ ಸೆಲೆ????
ಮನಸು ಮತ್ತೆ ಜಾರುತಿದೆ ಕನಸಿನ ಲೋಕಕೆ.......



Tuesday, 12 April 2011

ಈ ಗೆಳತಿಯ ಅಂತರಂಗದ ಒಂದು ಲುಕ್ ಕಣೋ ಗೆಳೆಯ

ಭೂಮಿಗೆ ಬಂದ ಈ ದಿನ ಯೋಚಿಸಿದ್ದೆಯಾ ನೀನು....
ನನ್ನ ಹೃದಯದಲ್ಲಿ ಜಾಗ ಪಡೆಯುವೆ ಎಂದು????
ನನ್ನ ನೂರಾರು ಹಾರೈಕೆ ನಿನಗಾಗಿಯೆ ಎಂದು??

ಆಸೆ ಪಡುತ್ತಿರುವೆ ಗೆಳೆಯ !!
ನಿನ್ನ ಪ್ರೀತಿ ಹಾರೈಕೆಗಳ ಜಡಿ ಮಳೆಗೆ ಕೊಚ್ಚಿ ಹೋಗಬೇಕೆಂದು,
ಕೊನೆ ಮುಟ್ಟಬಾರದೆಂದು,
ನನಸಾಗುವುದೇ ಈ ಹುಚ್ಚು ಆಸೆ?

ಕಾಡಿಸಿ ಪೀಡಿಸುವ ಆಸೆ,
ಅರಿವಿದ್ದರು ತಪ್ಪೆಸಗುವ ಆಸೆ ಕಣೋ....
ನಿನ್ನ ಸಂಕಟವನ್ನು ನೋಡಿ,
ನಿನ್ನ ಕಣ್ಣಲ್ಲಿ ಪ್ರೀತಿ ಕಾಣುವ ಬಯಕೆ ಕಣೋ.....
ಬೈಗುಳದ ಕರಿ ಮೋಡವನ್ನು ಹೊತ್ತು ತಂದು,
ಸಮಾದನದ ಮಳೆಯನ್ನು ಸುರಿಸಿ,
ಅಪ್ಪುಗೆಯ ಸುವಾಸನೆಯನ್ನು ಬೀರುವ,
ನಿನ್ನ ಪರಿಯ ನೋಡುವ.... ತವಕ ಕಣೋ.... ಹುಡುಗ.

ಆಗಾಗ ಮೋಡವಿಲ್ಲದೇ ಮಳೆ ಸುರಿಸುವ ನೀನು....
ಅರ್ಥವಾಗದೆ ಉಳಿಯುವೆಯಲ್ಲೋ ನನ್ನ ಮನಸಿನಲ್ಲಿ......

ನಿನ್ನನ್ನ ಎಲ್ಲದಕ್ಕೂ ಹೋಲಿಸುವ ಆಸೆ ಕಣೋ,
ಎಲ್ಲದನ್ನು ಮೀರಿದ ನಿನ್ನನ್ನು....
ಹೂಲಿಸಲಾರದೆ.... ಬೆಪ್ಪಾಗಿ ಕುಳಿಸುವ,
ಈ ತಳಮಳವು ಹೌದು ಕಣೋ!!!

ಆದರು ಕಾಯುತ್ತಿರುವೆ,
ಆ ಮೋಡಕ್ಕಾಗಿ, ಆ ಮಳೆಗಾಗಿ, ಆ ಸುವಾಸನೆಗಾಗಿ,
ಬರುವೆಯಾ ಅವೆಲ್ಲವನು ಹೊತ್ತು,
ಈ ಪ್ರೀತಿಯ ಗೆಳತಿಗಾಗಿ?????

Monday, 11 April 2011

ಮರುಕಳಿಸುವ ಮಧುರ ಯಾತನೆ

ಮನಸಿನೊಂದಿಗೆ ಮಾತಾಡುತ ಉರುಳಿತು ವರುಷ......
ಕಲ್ಪನೆಗಳ ಮಳೆಯೆ ತಂದಿತು ಮಧುರ ಹರುಷ....
ಕನಸು ಕಾಣುವ ಮನ, ಕನಸಿನಲ್ಲೇ ಜೀವನ,
ಕನಸೊಂದಿದ್ದರೆ ಸಾಕು, ಜೀವನ ಪಾವನ,
ಅಂಥನಿಸಿದ ಕಾಲವೊಂದಿತ್ತು...
ಕಾಲ ಉರುಳಿದೆ, ಚಕ್ರ ಸವೆದಿದೆ,
ಕನಸಿನ ಮನೆ ಬರಿದಾಗಿದೆ,
ಮನೆಯ ಬಾಗಿಲಿಗೆ ತೋರಣವಿಲ್ಲ,
ಹೊಸ್ತಿಲಿಗೆ ಹೂವಿಲ್ಲ,
ಕನಸಿನಲ್ಲಿದ್ದ ಗೆಳೆಯನೂ ಇಲ್ಲ,
ಬರೀ ನೆನಪುಗಳ ಸೋನೆ,
ಮರುಕಳಿಸುವ ಮಧುರ ಯಾತನೆ........

ಗೋಡೆಯ ಕಟ್ಟುತಿರುವೆ ಸುರಿಯುತಿರುವ ಯಾತನೆಗೆ,
ಬುನಾದಿಯೆ ಭದ್ರವಿಲ್ಲ...
ಗೂಡೆಯಾದರು ನಿಂತೀತು ಹೇಗೆ???
ಕನಸಾದರೋ ಕೂದಲಂತೆ,
ಬೆಳೆಯುತ್ತಿರುತ್ತದೆ, ಮುರುಟುತ್ತಿರುತ್ತದೆ,
ಚಿಗುರೆಲೆಯಂತೆ ಚಿಗುರುತ್ತದೆ, ಉದುರತ್ತದೆ,
ಜೀವನವೇ ಇಲ್ಲಿ ಕನಸಾದರೆ???

ಗೂಡು ಕುಸಿದಂತೆಲ್ಲ, ಮತ್ತೊಂದು ಗೂಡು ಹುಟ್ಟುತದೆ,
ಒಂದು ಗೂಡು ಕುಸಿದಿದೆ, ಮಗದೊಂದು ಗೂಡು ಜನಿಸಿದೆ,
ನಿರಾಸೆಯ ಗುಡಿಸಿ,
ಆಸೆ ಎಂಬ ಹೂವಿನ ತೋರಣವ ಮಾಡಿ,
ನಾಳೆ ಎಂಬ ಬಾಗಿಲಿಗೆ ಅಲಂಕರಿಸುವೆ,
ಮತಿ ಇಲ್ಲದ ಗತಿಯಲ್ಲಿ ಓಡುತಿರುವ ಕಾಲಚಕ್ರವೇ,
ನಿನ್ನ ಬಾಗಿಲೊಳ ಬಂದಿಸುವೆ...
ಪ್ರೀತಿಯ ನೀರೆರೆವೆ..
ಗೆಳೆಯ ನಿನ್ನ ಬರುವಿಕೆಗಾಗಿ ಕಾಯುವೆ...
ಇಂದು ನಾಳೆಗಳ ಎಣಿಸುತಿರುವೆ,
ಹೊಸ್ತಿಲ ಮೇಲೆ ಕುಳಿತು,
ನೀ ಬರುವೆಯಲ್ಲಾ ಗೆಳೆಯ???
ಆ ದಿನ ಈ ಗೂಡಿಗೆ ಸಂಭ್ರಮದ ಹಬ್ಬ,
ಕಾಲಚಕ್ರವೆ... ನನ್ನೊಲವ ನೋಡಿ, ನೀನಾದೆ ತಬ್ಬಿಬ್ಬ......

ಖುಷಿಯಾಗುವೆಯ ನೀನು ಬಿಡುಗಡೆಯಾಯಿತೆಂದು,
ಮತ್ತೆ ಮತಿಇಲ್ಲದ ಗತಿಯಲ್ಲಿ ಒಡಬಹುದೆಂದು??
ನೀ ಓಡಲಾರೆ.... ನೀ ಸುತ್ತಲಾರೆ....
ನಿನ್ನ ಚಕ್ರವೇ ನಿನ್ನ ಬಂದಿಸಿದೆ,
ನಮ್ಮ ಪ್ರೀತಿಯ ಸಮಾಗಮವ ಕಂಡು....

ಪ್ರೀತಿಯ ಮುಂದೆ ಎಲ್ಲಾ ಕ್ಷೀಣ,
ಮುಂದೊಂದು ದಿನ ಅದರಲ್ಲಿ ನೀನು ಲೀನ.